Sunday 9 August 2015

FRIENDSHIP

ಮನೆ ತುಂಬಾ ಮಕ್ಕಳು..
ಕಿತ್ತು 
ತಿನ್ನುವ ಬಡತನ...
ಹಸಿವು...

ಬದುಕಿನ
ನಿಜವಾದ ಬಣ್ಣವನ್ನು ಪರಿಚಯ ಮಾಡಿಸುವದೇ ಈ ಹಸಿವು... !

ಹೆಂಡತಿಗೆ ಸಹಿಸಲಾಗಲಿಲ್ಲ...

"ನಿಮ್ಮ 
ಸ್ನೇಹಿತ ಶ್ರೀಕೃಷ್ಣ..
ಈಗ ರಾಜನಾಗಿದ್ದಾನೆ...

ಹೋಗಿ..
ಒಮ್ಮೆ ಭೇಟಿಯಾಗಿ ಬನ್ನಿ..."

ಸುಧಾಮನಿಗೆ ಸಂಕೋಚವಾಯಿತು...

"ಹೇಗೆ ಹೋಗಲಿ.. ?

ಆತ ಚಕ್ರವರ್ತಿ...
ಶ್ರೀಮಂತ..
ಲೋಕವೇ ಅವನನ್ನು ಪೂಜಿಸುತ್ತಿದೆ...

ನನ್ನ 
ವೇಷ ಭೂಷಣಕ್ಕೂ ಅವನ ಭೇಟಿಯಾಗುವ ಯೋಗ್ಯತೆ ಇಲ್ಲ...

ನಾವು ಸಣ್ಣವರಿದ್ದಾಗ ಸ್ನೇಹವಿತ್ತು...

ಈಗ
ಆತನಿಗೆ ನನ್ನ ನೆನಪು ಇದೆಯೋ.. ಇಲ್ಲವೋ ಗೊತ್ತಿಲ್ಲ..."...

ಸುಧಾಮನ ಮಡದಿ ಬಿಡಲಿಲ್ಲ..

"ಸ್ನೇಹಕ್ಕೆ 
ಅಂತಸ್ತು... ಶ್ರೀಮಂತಿಕೆ..ಇವುಗಳ ಅಗತ್ಯವೇ ಇಲ್ಲ..

ಸ್ನೇಹಕ್ಕೆ 
ಕೇವಲ ಭಾವನೆ.. ನೆನಪುಗಳು... ಹೃದಯ ಶ್ರೀಮಂತಿಕೆ ಸಾಕು..
ಹೋಗಿ ಬನ್ನಿ..."

ಸುಧಾಮನಿಗೆ ಮತ್ತೆ ಸಂಕೋಚ..

"ಖಾಲಿ ಕೈಯ್ಯಲ್ಲಿ ಹೇಗೆ ಹೋಗಲಿ ?....

ಏನಾದರೂ 
ತೆಗೆದುಕೊಂಡು ಹೋಗಲು ನಮ್ಮ ಬಳಿ ಏನೂ ಇಲ್ಲವಲ್ಲ.."....

ಮಡದಿ ಹಠವಾದಿ...

ಮನೆಯ ಡಬ್ಬಗಳನ್ನೆಲ್ಲ ಹುಡುಕಾಡಿದಳು..

ಎರಡು ಮುಷ್ಟಿ "ಅವಲಕ್ಕಿ" ಸಿಕ್ಕಿತು... !

ಅವನ 
ಪಂಚೆಯ ತುದಿಗೆ ಅದನ್ನು ಕಟ್ಟಿ..

"ಹೋಗಿ ಬನ್ನಿ...
ಶ್ರೀಕೃಷ್ಣ ಕೇಳಿದರೆ ಇದನ್ನು ಕೊಡಿ...

ಅರ್ಥವಾಗುವ ಮನಸ್ಸಿಗೆ 
ಹೃದಯಕ್ಕೆ
ವಸ್ತುಸ್ಥಿತಿಯನ್ನು ಹೇಳುವ ಅಗತ್ಯವಿರುವದಿಲ್ಲ... ಅರ್ಥವಾಗುತ್ತದೆ..."...

ಸುಧಾಮ 
ಬಲು ದೂರ ನಡೆದು..
ಬಳಲಿ.. ಬೆಂಡಾಗಿ..
ಹಸಿವೆಯಿಂದ
ಶ್ರೀಕೃಷ್ಣನ ಮನೆಯ ದ್ವಾರದ ಬಳಿ ಬಂದ....

ದ್ವಾರ ಪಾಲಕ ಒಳಗೆ ಬಿಡಲಿಲ್ಲ...

"ನಾನು
ಶಿಕೃಷ್ಣನ ಗೆಳೆಯ...
ಬಾಲ್ಯ ಸ್ನೇಹಿತ..."....

ದ್ವಾರ ಪಾಲಕ ನಕ್ಕ... !

ಬಡತನಕ್ಕೆ 
ಕಣ್ಣೀರು...
ಹಸಿವೆಯನ್ನು ಬಿಟ್ಟು...
ಸುಲಭವಾಗಿ ಮತ್ತೆ ಯಾವುದೂ ದಕ್ಕುವದಿಲ್ಲ...

"ಪುಣ್ಯಾತ್ಮ...
ಒಳಗೆ ಹೋಗಿ ಶ್ರೀಕೃಷ್ಣನಿಗೆ "ಸುಧಾಮ ಬಂದಿದ್ದಾನೆ" ಅಂತಾದರೂ ಹೇಳು...

ಆತನಿಗೆ ನೆನಪು ಇಲ್ಲವಾದಲ್ಲಿ ತಿರುಗಿ ಹೋಗುವೆ... "....

ದ್ವಾರಪಾಲಕ
ಒಳಗೆ ಹೋಗಿ ಕೃಷ್ಣನಿಗೆ ಸುಧಾಮನ ಹೆಸರು ಹೇಳಿದ..

ಕೃಷ್ಣ
ಓಡೋಡಿ ದ್ವಾರದವರೆಗೆ ಬಂದ...

ತನ್ನ ಬಾಲ್ಯದ ಗೆಳೆಯನನ್ನು ತಬ್ಬಿಕೊಂಡ..

ಕಣ್ಣಲ್ಲಿ ನೀರು ಇಳಿಯುತ್ತಿತ್ತು...

ಸುಧಾಮನನ್ನು
ಒಳಗೆ ಕರೆತಂದು ತಾನು ಕುಳಿತುಕೊಳ್ಳುವ ಆಸನದಲ್ಲಿ ಕುಳ್ಳಿರಿಸಿದ...

ಅವನ ಪಾದ ತೊಳೆದ..
ಬಿಸಿಲಲ್ಲಿ 
ಬರಿಗಾಲಲ್ಲಿ ನಡೆದು ಬೊಬ್ಬೆಗುಳ್ಳೆಗಳಾಗಿದ್ದ ಗೆಳೆಯನ ಕಾಲುಗಳನ್ನು ನೋಡಿ ಮರುಗಿದ...
ದುಃಖಿಸಿದ...

ತಮ್ಮ ಬಾಲ್ಯದ ತುಂಟಾಟಗಳನ್ನು ನೆನಪಿಸಿದ...

ಹರಟಿದ... ನಗಿಸಿದ...
ಒಂದು
ಕ್ಷಣಕ್ಕಾದರೂ ಸುಧಾಮನ ನೋವುಗಳನ್ನು ಮರೆಸಿದ... !

ಹೊಟ್ಟೆ ತುಂಬಾ ಮೃಷ್ಟಾನ್ನ ಭೋಜನ ಬಡಿಸಿದ...

"ಗೆಳೆಯಾ...
ನನಗಾಗಿ ಏನು ತಂದಿರುವೆ...?..".... 

ಸುಧಾಮ 
ನಾಚಿ.. ಸಂಕೋಚದ ಮುದ್ದೆಯಾದ..

ಎಲ್ಲಿಯ ಶ್ರೀಕೃಷ್ಣ.. !
ಆವನ ಅರಮನೆಯ ವೈಭವ... ಮೃಷ್ಟಾನ್ನ ಭೋಜನ..!

ಎಲ್ಲಿಯ 
ಕುಚೇಲ
ಸುಧಾಮನ ಎರಡು ಹಿಡಿ ಮುಷ್ಟಿಯ ಒಣ ಅವಲಕ್ಕಿ ?...

ಕೃಷ್ಣ ಬಿಡಲಿಲ್ಲ...

ಪಂಚೆಯ ತುದಿಯಲ್ಲಿ ಕಟ್ಟಿದ ಅವಲಕ್ಕಿ ಕಾಣಿಸಿತು...

ಗಂಟು ಬಿಚ್ಚಿ...
ಅವಲಕ್ಕಿಯನ್ನು ಬಾಯಲ್ಲಿ ಹಾಕಿಕೊಂಡು ಬಾಯಿ ಚಪ್ಪರಿಸಿದ...

ಸುಧಾಮನ ಕಣ್ಣಲ್ಲಿ 
ನೀರಿಳಿಯುತ್ತಿತ್ತು..

ಒಂದೆರಡು ದಿನ ಅಲ್ಲಿದ್ದು 
ಶ್ರೀಕೃಷ್ಣನಿಂದ ಬಿಳ್ಕೊಟ್ಟು ಮನೆಯ ಕಡೆ ಹೊರಟ..

ಮನೆಯ 
ಬಳಿ ಬಂದಾಗ ಅವನ ಮನೆ ಅಲ್ಲಿರಲಿಲ್ಲ...
ದೊಡ್ಡ ಅರಮನೆಯಿತ್ತು...

ಅವನ ಮಕ್ಕಳು ಒಳ್ಳೆಯ ಉಡುಪುಗಳನ್ನು ಧರಿಸಿ ಅಪ್ಪನನ್ನು ಸ್ವಾಗತಿಸಿದರು..

ಮಡದಿ
ರೇಷ್ಮೆ ಸೀರೆ ಉಟ್ಟು... ಮೈ ತುಂಬಾ ಆಭರಣ ಧರಿಸಿ ನಗು ನಗುತ್ತಾ ಸ್ವಾಗತಿಸಿದಳು....

ಕೃಷ್ಣನ ಭೇಟಿಯಲ್ಲಿ
ಸುಧಾಮನಿಗೆ ನಾಲಿಗೆ ಕಟ್ಟಿತ್ತು...

ಸಹಾಯ ಕೇಳಿರಲಿಲ್ಲ...

ಆದರೆ 
ಶ್ರಿಕೃಷ್ಣ 
ತನ್ನ ಗೆಳೆಯನನ್ನು..

ಗೆಳೆತನವನ್ನು ಮರೆತಿರಲಿಲ್ಲ...

ಒಮ್ಮೆ
ಶುರುವಾದ ಸ್ನೇಹಕ್ಕೆ "ಮರೆವು" ಎನ್ನುವದು ಇರುವದಿಲ್ಲ...

ದೂರ..
ಹತ್ತಿರ...
ಮಾತು.. ಮೌನ 
ಎಲ್ಲವನ್ನೂ ಮೀರಿದ ಭಾವ ಸಂಬಂಧ ಇದು.. !
:::::::::::::::::::

ನಮ್ಮ

ಪ್ರತಿ ಮಾತಿನಲ್ಲಿ...
ಮೌನದಲ್ಲಿ... 
ಪವಿತ್ರವಾದ ಸ್ನೇಹ ಪರಿಮಳವಿರಲಿ....

ನಮ್ಮ ಪ್ರತಿ ಸಂಬಂಧಗಳಲ್ಲಿ "ಭಾವನೆಗಳಿರಲಿ"...

ನಮ್ಮ
ಪ್ರತಿಯೊಂದು ಸಂಬಂಧಗಳು
ಭಾವ
ಭಾಂಧವ್ಯಗಳಾಗಲಿ..
ಅವುಗಳನ್ನು ನಿಭಾಯಿಸುವ ಶಕ್ತಿ ನಮಗಿರಲಿ...

ನಮ್ಮ
ಪ್ರತಿಯೊಂದೂ ಸಂಬಂಧಗಳಲ್ಲಿ ಒಬ್ಬ ನಗುವ ಗೆಳೆಯನಿರಲಿ....

No comments:

Post a Comment