Saturday 22 August 2015

Hindu dharma

ದೇವರು ಒಬ್ಬನೆ!

ದೇವರು ಒಬ್ಬನೆ ಎಂದು ಸನಾತನವೂ ಹೇಳಿದೆ. ಅನ್ಯ ಧರ್ಮಿಯರು ಹಿಂದುಗಳಿಗೆ ನೂರಾರು ದೇವರು ಎಂದು ತಮಾಷೆ ಮಾಡಿ ನಗುವುದನ್ನು ನೋಡಿದರೆ ನಮಗೂ ನಗು ಬರುತ್ತದೆ.

ದು.ಬು.ಗಳಿಗೂ ನಗುಬರುತ್ತದೆ.ನಾವು ನಗುವ ರಹಸ್ಯವೇ ಬೇರೆ.ದು.ಬು.ಜೀ( ದುರ್ಬುದ್ಧಿ ಜೀವಿಗಳು) ನಗುವ ವಿಚಾರವೇ ಬೇರೆ. ದು ಬು ಜೀ ಗಳು ಅನ್ಯಧರ್ಮಗಳವರು ಹೇಳಿದ್ದು ಸರಿಯಾಗಿದೆ, ಹಿಂದುಗಳಲ್ಲಿ ಮೂರ್ಖ ನಂಬಿಕೆಗಳಿವೆ ಎಂದು ನಗುತ್ತಾರೆ.ಆದರೆ ನಮ್ಮ ನಗು ಹಾಗಲ್ಲ. ‘ಎಲವೋ ಮೂರ್ಖ ಮಾನವರೇ.. ನೀವು ದೇವರನ್ನು ಕುರುಡರಾಗಿ ನಂಬುವ ಕಾರಣ ನಿಮಗೆ ಒಬ್ಬನಾಗಿಯೇ ಕಾಣುತ್ತಾನೆ.ನಾವು ಒಳಗಣ್ಣು ತೆರೆದು ನೋಡಿಯೇ ದೇವರ ಹಲವು ರೂಪಗಳನ್ನು ಕಾಣುತ್ತೇವೆ.ದೇವರ ಬಗ್ಗೆ ನಿಮಗೇನೂ ತಿಳಿಯದು ಅದಕ್ಕಾಗಿಯೇ ನಮಗೆ ನಗುಬರುತ್ತದೆ.’
ದೇವರೆಂದರೆ ಏನು ಎಂಬುದಕ್ಕೆ ಅವರಲ್ಲಿ ಸರಿಯಾದ ಉತ್ತರ ಸಿಗದು. ಉತ್ತರ ನಮ್ಮಲ್ಲಿದೆ. ಹಲವು ಚೈತನ್ಯಗಳ ಒಂದು ಸಂಘಟಿತ ರೂಪವೇ ವಿಶ್ವರೂಪದರ್ಶನ ಮಾಡಿಸಿದ ದೇವದೇವೋತ್ತಮ ಭಗವಂತ.ಅದನ್ನು ವಿಷ್ಣುವೆನ್ನಿ ಶಿವನೆಂದುಕೊಳ್ಳಿ, ಬ್ರಹ್ಮ ಎಂದು ಬೇಕಾದರೂ ಕರೆದುಕೊಳ್ಳಿ.ಅಥವಾ ಅಲ್ಲಾಹು, ಜೀಸಸ್ ಎಂದು ಬೇಕಾದರೂ ಕರೆಯಿರಿ. ಇದನ್ನು ಒಳಹೊಕ್ಕು ನೋಡಿದರೆ ಅಲ್ಲಿ(explore ಮಾಡಿದಾಗ) ಅಲ್ಲಿ ನಮಗೆ ಭಗವಂತನ ಅನೇಕ ಶಕ್ತಿ ಸ್ವರೂಪಗಳು ಕಾಣುತ್ತದೆ. ವಿಘ್ನವಿನಾಶಕ, ರೋಗ ನಿವಾರಕ,ವಿದ್ಯಾ ಪ್ರದಾಯಕ, ಮಂಗಲ ಕಾರಕ, ಬಾಧಾನಿವಾರಕ, ಶತ್ರು ಸಂಹಾರಕ, ಕೋಶ ರಕ್ಷಕಿಯಾದ ದುರ್ಗಾ ಮಾತೆ, ಭೂ ನಿಧಿ ರಕ್ಷಕ ನಾಗದೇವರು, ಮೃತ್ಯು ದೋಷ ನಿವಾರಕ ಮೃತ್ಯುಂಜಯ ಇತ್ಯಾದಿ ಸಹಸ್ರ ಸಹಸ್ರ. ಶಕ್ತಿಸ್ವರೂಪಗಳು ಕಾಣುತ್ತವೆ.ನಮಗೆ ಬೇಕಾದ ಶಕ್ತಿ ಚೈತನ್ಯಗಳನ್ನು ಉಪಾಸನೆ ಮಾಡುತ್ತೇವೆ. ಆದರೆ ಕೊನೆಗೆ ಎಲ್ಲಾ ಆರಾಧನೆಯನ್ನು ‘ ಪ್ರದ್ಯುಮ್ನಾನಿರುದ್ಧ ಸಂಕರ್ಷಣ ಮೂರ್ತಿಯಾದ ಭಗವಾನ್ ವಾಸುದೇವನಿಗೆ ಅರ್ಪಿಸುತ್ತೇವೆ.
ಹೇಗೆ ದೂರದಿಂದ ನೋಡಿದಾಗ ದೇಶದ ಪ್ರಧಾನ ಮಂತ್ರಿ ಮಾತ್ರ ಕಾಣುತ್ತಾನೋ ಹಾಗೆಯೇ ದೂರದಿಂದ ಒಬ್ಬನೇ ದೇವರು ಕಾಣುವುದು. ಪ್ರಧಾನ ಮಂತ್ರಿಯ ಒಳಹೊಕ್ಕು ನೋಡಿದರೆ ಗ್ರಾಮ ಪಂಚಾಯತಿಯವರೆಗೆ ಕಾಣುತ್ತದೆ. ಯಾವಾಗ ಹೊರಗಿನಿಂದ ಮಾತ್ರ ನೋಡಿ ಒಬ್ಬನೇ ದೇವರು ಎಂದು ಕಾಣುತ್ತಾರೋ ಅವರಿಗೆ ಮತಾಂಧತೆ ಬರುತ್ತದೆ.ಈಗ ಹಾಗೆಯೇ ಆಗಿದೆ.ಅದಕ್ಕಾಗಿ ಮತಾಂತರವೂ ಆಗುವುದು. ವ್ಯಕ್ತಿ ತನಗೆ ಬೇಕಾದ ಶಕ್ತಿಗೆ ಅಂತಹ ಶಕ್ತಿಸ್ವರೂಪ ಪಡೆಯಲು ದೇವ ಒಳಗಿನ ಆ ಚೈತನ್ಯಗಳನ್ನು ಉಪಾಸಿಸುತ್ತಾನೆಯೇ ಹೊರತು ಬೇಧಭಾವದಿಂದಲ್ಲ. ಆಗ ಹೊರಗಿನವರು ಅಂದರೆ ಅನ್ಯ ಧರ್ಮೀಯರು ಇದರೊಳಗೆ ಬೇಧಭಾವಗಳಿವೆ ಎಂದು ತಪ್ಪಾಗಿ ತಿಳಿದುಕೊಂಡರು.
ಸ್ವಾತ್ವಿಕವೂ ಬೇಕು, ರಾಜಸವೂ ಬೇಕು,ತಾಮಸವೂ ಬೇಕು.ಇದು ಮೂರು ಗುಣ ಚೈತನ್ಯಗಳು. ಸಾತ್ವಿಕವು ಪ್ರೀತಿ ಪ್ರೇಮಾದರಗಳಿಗೆ ಬೇಕು.ರಾಜಸವು ಒಂದು ವ್ಯವಸ್ಥೆಯನ್ನು ನಿಭಾಯಿಸಲು( ಆಡಳಿತ) ಬೇಕು.ತಾಮಸವು ಈ ಆಡಳಿತದಲ್ಲಿನ ದುಷ್ಪ್ರವೃತ್ತಿಯನ್ನು ನಿಯಂತ್ರಿಸಲು ಬೇಕು.ಒಟ್ಟಿನಲ್ಲಿ ಇದು ಚತುರೋಪಾಯಗಳಾದ ಸಾಮ, ದಾನ, ಬೇಧ, ದಂಡೋಪಾಯಗಳ ನಿರ್ವಹಣೆಗೆ ಬೇಕು.ಈ ಚತುರೋಪಾಯಗಳೊಳಗೆ ನೂರಾರು ಉಪ ಭಾಗಗಳಿವೆ.ಎಲ್ಲದಕ್ಕೂ ಅಭಿಮಾನಿ ದೇವತೆಗಳಿದ್ದಾರೆ.ಹಾಗಾಗಿ ಅನ್ಯ ಮತೀಯತಿಗೆ ನೂರಾರು ದೇವತಾ ಪೂಜಕರಾಗಿ ಹಿಂದುಗಳು ಕಾಣುವುದು.ಉದಾಹರಣೆಗೆ ಒಂದು ಪಡಿತರ ಚೀಟಿ ಬೇಕಾದರೆ ಪ್ರಧಾನ ಮಂತ್ರಿಯನ್ನೇ ಕೇಳುವುದಲ್ಲ.ಅದಕ್ಕೆ ಸಂಬಂಧಿಸಿದ ಗ್ರಾಮ ತಾಲೂಕ ಮಟ್ಟದ ಆಡಳಿತಗಳಿವೆ. ಅವರನ್ನೇ ಕೇಳಬೇಕು.ಇದಕ್ಕೆಲ್ಲ ಮೂಲ ಪ್ರಧಾನ ಮಂತ್ರಿ. ನಾವು ಬಿಂಬದೊಳಗೆ ದೇವರನ್ನು ಆವಾಹಿಸಿ ಪೂಜಿಸುವ ಸುಲಭೋಪಾಯ ಅರಿತವರು.ಅವರು ಬಿಂಬವಿಲ್ಲದೆ ಏಕೋಪಾಸನೆಗೆ ಹೊರಟವರು.ಆದರೆ ಅವರು ಇದರಲ್ಲಿ ಏಕಾಗ್ರತೆಯನ್ನು ಪಡೆಯಲಾಗದೆ ಸೋಲುತ್ತಾರೆ.ಯಾವಾಗಲೂ ನೆಮ್ಮದಿ ಸಿಗದಿದ್ದಾಗ ತಾಮಸ ಪ್ರವೃತ್ತಿಗೆ ಹೋಗುವುದು.ಇವರಿಗೆ ನೆಮ್ಮದಿ ಸಿಗುತ್ತಿಲ್ಲ.
ಈ ವಿಚಾರಗಳು ನಮ್ಮ ಜನರಲ್ಲಿ ಅನೇಕರಿಗೆ ಗೊತ್ತಿರುವುದಿಲ್ಲ.ಹಾಗಾಗಿ ದು.ಬು.ಜಿಯಾಗಿಯೋ, ಮತಾಂತರಗೊಂಡೋ ನೆಮ್ಮದಿಯ ಹುಡುಕಾಟ ಮಾಡುತ್ತಾರೆ. ಅದಕ್ಕಾಗಿ ನಮ್ಮಲ್ಲಿ ಜಾತ್ರೆ ಉತ್ಸವಾದಿಗಳು, ಹರಿಕತೆ ಪ್ರವಚನಾದಿಗಳು, ತುಳುನಾಡಿನ ಭೂತ ಕೋಲ,ನಾಗಾರಾಧನೆ ಇತ್ಯಾದಿಗಳು ಜನರಲ್ಲಿ ದೇವರ ಬಗೆಗಿನ ಜಾಗೃತಿಗಾಗಿ ಹುಟ್ಟಿಕೊಂಡವು.ಜತೆಗೆ ಮಾನಸಿಕ ನೆಮ್ಮದಿಯೂ ಲಭಿಸುತ್ತದೆ.ನೆಮ್ಮದಿ ಸಿಕ್ಕರೆ ಯಾರೂ ತಾಮಸಿಗಳಾ ಗುವುದಿಲ್ಲ.ದುಃಖಿತರೂ ಆಗುವುದಿಲ್ಲ. ಆದ್ದರಿಂದ ದೇವನೊಬ್ಬನೇ ಎಂದು ನಮಗಾರೂ ಹೇಳಬೇಕಾಗಿಲ್ಲ.ನಾವು ಅವರಿಗೆ ಚೈತನ್ಯ ಸ್ವರೂಪಗಳು ಸಾವಿರಾರು ಎಂದು ಹೇಳಿಕೊಡಬೇಕು.

ಪ್ರಕಾಶ್ ಅಮ್ಮಣ್ಣಾಯ.

No comments:

Post a Comment